ಬಂಟ್ವಾಳ ವಲಯದ ಸಾಧನೆಯ ಹೆಜ್ಜೆ...

      ಜೀವನದಿ ನೇತ್ರಾವತಿಯ ತಟದಲ್ಲಿ, ಬಿ.ಸಿ.ರೋಡು ಕೇಂದ್ರ ಸ್ಥಾನವನ್ನಾಗಿಸಿ ಫರಂಗಿಪೇಟೆ, ಬಂಟ್ವಾಳ, ವಿಟ್ಲಾ ನಗರಗಳ ವರ್ತುಲದಲ್ಲಿ ಗ್ರಾಮೀಣ ಭಾಗದ ಸರ್ವ ಸಮಾನ ಮನಸ್ಕರ ಛಾಯಾಗ್ರಾಹಕರ ಕ್ರಿಯಾಶೀಲ ಸಂಘಟನೆಯೇ ಎಸ್.ಕೆ.ಪಿ.ಎ. ಬಂಟ್ವಾಳ ವಲಯ.
      ಬದುಕು ರೂಪಿಸುವ ವೃತ್ತಿಯ ಮೂಲಕ ಛಾಯಾಗ್ರಹಣ, ವಿಡಿಯೋ ಚಿತ್ರೀಕರಣದ ರಂಗಕ್ಕೆ ಇಳಿದ, ಛಾಯಮಿತ್ರರು, ತಮ್ಮ ಸಂಸಾರಕ್ಕೆ ಆಧಾರವಾದರು. ಸಮಾಜಕ್ಕೆ ನಿಸ್ವಾರ್ಥದ ಸೇವೆಗೈಯುವ ಸೇವಕರಾದರು. ಆದರೆ ಸಂಘಟನೆಯ ಶಕ್ತಿಯಿಂದ ವಂಚಿತರಾಗಿದ್ದರು. ಏಕಾಂಗಿ ಹೋರಾಟವೇ, ಛಾಯಾಗ್ರಹಣ ಕ್ಷೇತ್ರದಲ್ಲಿ ಅನಿವಾರ್ಯವಾಗಿತ್ತು.
      ಅಂದು, 2000 ನೇ ಇಸವಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ - ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಪಡೆದವರು ದಿ" ಬಿ.ಆರ್. ಸನೀಲ್, ಉತ್ತಮ ಚಿಂತನೆಯಿಂದ ಛಾಯಾಗ್ರಾಹಕರನ್ನು ಸಂಪರ್ಕಿಸಿ, ವಲಯ ಸಂಘಟನೆಗೆ ಮಾರ್ಗದರ್ಶನ ನೀಡಿ, 2000 ರಲ್ಲಿ ಬಂಟ್ವಾಳ ಎಸ್.ಕೆ.ಪಿ.ಎ ಜನ್ಮ ತಾಳಿತು. 15 ವರ್ಷಗಳನ್ನು ಪೂರೈಸಿತು.
      26 ಸದಸ್ಯ ಬಲವನ್ನು ಒಳಗೊಂಡ ಎಸ್.ಕೆ.ಪಿ.ಎ, ಬಂಟ್ವಾಳ ವಲಯದ ಸ್ಥಾಪಕ ಅಧ್ಯಕ್ಷರಾಗಿ ಬಂಟ್ವಾಳ ವೈಶಾಲಿ ಸ್ಟುಡಿಯೋದ ಹರೀಶ್ ರಾವ್, ಅಧಿಕಾರವನ್ನು ಪಡೆದು ಸಾಮಾಜಿಕವಾಗಿ ಸೇವೆಗೈಯಲು ಬಂಟ್ವಾಳ ಎಸ್.ಕೆ.ಪಿ.ಎ ವಲಯಕ್ಕೆ ಮುನ್ನುಡಿಯನ್ನು ಬರೆದರು. 4 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸಂಘಟನೆಯನ್ನು ಸಮಾಜ ಗುರುತಿಸುವಂತೆ ಪ್ರಯತ್ನಿಸಿದರು. ತದನಂತರ ಪಿಂಕಿ ಸ್ಟುಡಿಯೋದ ಥಾಮಸ್ ಡಿ'ಕೋಸ್ತ, ಚಿತ್ರಾ ಸ್ಟುಡಿಯೋದ ರಮೇಶ್ ರಾವ್, ದಿನೇಶ್ ಸ್ಟುಡಿಯೋದ ದಿನೇಶ್, ಪಲ್ಲವಿ ಸ್ಟುಡಿಯೋದ ಪದ್ಮನಾಭ ರಾವ್, ಕಾರ್ತಿಕ್ ಸ್ಟುಡಿಯೋದ ಸತೀಶ್ ಕುಮಾರ್, ಮೇಘ ಸ್ಟುಡಿಯೋದ ದಯಾನಂದ ಬಂಟ್ವಾಳ್, ಸೌಮ್ಯ ಸ್ಟುಡಿಯೋದ ಆನಂದ್, ಸಂಘಟನೆಯ ಚುಕ್ಕಾಡಿ ಹಿಡಿದು ಪದಾಧಿಕಾರಿಗಳ ಸದಸ್ಯರ ಉತ್ತಮ ಬೆಂಬಲದಿಂದ ಸಂಘವನ್ನು ಸಮಾಜ ಸ್ನೇಹಿ ಸಂಘಟನೆಯಾಗಿ ಬೆಳೆಯಲು ಕಾರಣವಾಯಿತು. ಜಿಲ್ಲಾ ಸಂಘದಿಂದ ಶಹಭಾಸ್ ಪಡೆಯುವಲ್ಲಿ ಸಫಲವಾಯಿತು. ಪ್ರಸ್ತುತ ಭಗವತಿ ಸ್ಟುಡಿಯೋದ ಸುಕುಮಾರ್ ಅಧ್ಯಕ್ಷರಾಗಿ, ಜಿಲ್ಲಾ ಸಂಘದ ಬೆಳ್ಳಿ ಬೆಳಕಿನ ಹಬ್ಬದ ಸಂದರ್ಭದಲ್ಲಿ, ವಲಯದ ಕಾರ್ಯಚಟುವಟಿಕೆಗಳಿಗೆ ನಾಯಕರಾಗಿದ್ದಾರೆ. ಎರಡು ವರ್ಷಗಳ ಅಧಿಕಾರ ಅವಧಿ ಇರುವ ಅಧ್ಯಕ್ಷರಿಗೆ ಉತ್ತಮ ಪದಾಧಿಕಾರಿಗಳ ಶಕ್ತಿಯೂ ಇದೆ. ಪ್ರಸಕ್ತ 170 ಸದಸ್ಯ ಬಲ ಇರುವ ಎಸ್.ಕೆ.ಪಿ.ಎ, ಬಂಟ್ವಾಳ ವಲಯ. ಜನಮನದಲ್ಲಿ ಉತ್ತಮ ಕೆಲಸಗಳ ಮೂಲಕ ಪ್ರೀತಿಯನ್ನು ವಿಶ್ವಾಸವನ್ನು ಗಳಿಸಿದೆ ಎನ್ನುವ ಹೆಮ್ಮೆ ಇದೆ.
      ಕಲೆ-ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಆರೋಗ್ಯ, ಧಾರ್ಮಿಕ, ಸಾಮರಸ್ಯ, ಶಿಕ್ಷಣ, ಮುಂತಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ, ಸಂಘಟನೆಯ ಮೂಲಕ ವರ್ಷವೂ ಹರುಷದಿಂದ ದುಡಿಯುವ ಬಂಟ್ವಾಳ ವಲಯದ ಛಾಯಬಂಧುಗಳು ವೃತ್ತಿಯ ಜೊತೆಯಲ್ಲಿ ಸಾಮಾಜಿಕ ರಂಗದಲ್ಲೂ ಗುರುತಿಸಿಕೊಂಡವರು.

      ಜನ ಪ್ರತಿನಿಧಿಗಳಾಗಿ ಸೇವಾ ಸಂಸ್ಥೆಯ ಗಣ್ಯರಾಗಿ, ಸಾಧನೆಯ ಸಾಧಕರಾಗಿ, ಜನತೆಯ ಮುಂದೆ ಅಭಿಮಾನದ ವ್ಯಕ್ತಿಗಳಾಗಿ ಹೆಸರು ಪಡೆದವರು.
      ದುಡಿದ ಹಣದಿಂದ ಸ್ವಲ್ಪ ಭಾಗವನ್ನು ಸಾಮಾಜಿಕ ಸೇವೆಗೆ ನೀಡುತ್ತಾ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ನುಡಿಯಂತೆ, ಸಮಾಜಮುಖಿ ಸೇವೆಗೈದ ಎಸ್.ಕೆ.ಪಿ.ಎ, ಬಂಟ್ವಾಳ ವಲಯ. ಪ್ರತಿ ವರ್ಷವೂ ಉಚಿತ ವೈದ್ಯಕೀಯ ಸೇವೆಯ ಶಿಬಿರದ ಆಯೋಜನೆ. ಸಮಾಜದ ಸಾಧಕ ಗಣ್ಯರ ಗುರುತಿಸುವಿಕೆ. ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ನೆರೆ, ಪೆರ್ನೆಯಲ್ಲಿ ನಡೆದ ಅನಿಲ ದುರಂತ, ಮುಂತಾದ ಪ್ರಕೃತಿ ವಿಕೋಪ ನಿಧಿಗೆ ಧನ ಸಂಗ್ರಹ. ಗ್ರಾಮೀಣ ಅಂಗನವಾಡಿ ಕೇಂದ್ರಕ್ಕೆ ಧ್ವಜ ಸ್ತಂಭದ ಕೊಡುಗೆ, ರಾಷ್ಟ್ರೀಯ ಹಬ್ಬಗಳ ಅರ್ಥಪೂರ್ಣ ಆಚರಣೆ, ಮಕ್ಕಳ ದಿನಾಚರಣೆಯ ಸಂದರ್ಭ, ಮಕ್ಕಳ ಫೋಟೋ ಸ್ಪರ್ಧೆ, ವನಮಹೋತ್ಸವ, ವಿಶ್ವ ಛಾಯಾಗ್ರಹಣ ದಿನಾಚರಣೆ,ಶಿಕ್ಷಕರ ದಿನಾಚರಣೆ, ಮುಂತಾದ ಕಾರ್ಯಕ್ರಮಗಳ ಮೂಲಕ ಆಯಾ ಭಾಗದ ಜನತೆಯ ನಡುವೆ ಕೊಂಡಿಯಾಗಿ ಬಾಂಧವ್ಯವನ್ನು ಬೆಸೆದಿದೆ..!
      ತಿಂಗಳ ಪ್ರತೀ ಮಂಗಳವಾರ ಛಾಯ ಬಂಧುಗಳು ಒಟ್ಟಾಗಿ ಸೇರುತ್ತಾ...ಸುಖ ಸಂತೋಷವನ್ನು ಹಂಚುತ್ತಾ, ನಮ್ಮೊಳಗಿರುವ ನೋವು-ನಲಿವುಗಳನ್ನು ತಿಳಿ ಹೇಳುತ್ತಾ ಸ್ಪಂದನೆಯ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸುತ್ತಾ ಬಂದಿದೆ.
      ಪ್ರತಿ ವರ್ಷವೂ ವರ್ಷಕ್ಕೆ ಎರಡು ಬಾರಿ ಕನ್ಯಾನದ ಸೇವಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಅನಾಥರ ಜೊತೆ ಬೆಸೆದು, ಅವರಿಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಿ ಸಹಜೀವನದ ಮೂಲಕ ಮಾನಸಿಕ ನೆಮ್ಮದಿ ನೀಡುವ ಕೆಲಸ ನಮ್ಮಿಂದ ಆಗಿದೆ. ಅಲ್ಲದೆ ನಮ್ಮ ಛಾಯಮಿತ್ರರ ಮತ್ತು ಅವರ ಮಕ್ಕಳ ಹುಟ್ಟು ಹಬ್ಬದ ಆಚರಣೆಯನ್ನು ಅಲ್ಲಿ ಆಚರಿಸಿ, ಹುಟ್ಟುಹಬ್ಬಕ್ಕೆ ಅರ್ಥವನ್ನು ನೀಡುತ್ತಿದ್ದೇವೆ. ಸಿಹಿಯೂಟದ ಮೂಲಕ ಸಂಭ್ರಮಿಸುತ್ತೇವೆ.
      ಜಿಲ್ಲಾ ಸಂಘದ 14 ವಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಪ್ರಥಮವನ್ನು ದಾಖಲಿಸುವುದು ಎಸ್.ಕೆ.ಪಿ.ಎ ಬಂಟ್ವಾಳ ವಲಯ. ಜಿಲ್ಲಾ ಮಟ್ಟದ ಕೆಳಸರುಗದ್ದೆ ಪಂದ್ಯಾಟ, ಹಲಸಿನೊಂದಿಗೆ ಒಂದು ದಿನ ಮುಂತಾದ ಕಾರ್ಯಕ್ರಮಗಳು, ಬಂಟ್ವಾಳದ ಮಣ್ಣಲ್ಲಿ ಮೊದಲಾಗಿ ಮೂಡಿ ಬಂತು. ಎಸ್.ಕೆ.ಪಿ.ಎ, ಮಿತ್ರರಿಗಾಗಿ ಕೆಸರುಗದ್ದೆ ಪಂದ್ಯಾಟ, ಇಂದು ಜಿಲ್ಲಾ ಕ್ರೀಡಾಕೂಟವಾಗಿ ಮಾನ್ಯತೆ ಪಡೆದು ಜಿಲ್ಲಾ ಸಂಘಟನೆಯ ಮೂಲಕ ವರ್ಷವೂ ಬೇರೆ ಬೇರೆ ವಲಯದಲ್ಲಿ ಅದ್ದೂರಿಯಾಗಿ ನಡೆಸಲ್ಪಡುತ್ತಿದೆ.
      2010 ರಲ್ಲಿ ನಮ್ಮ ವಲಯದ ದಶಮಾನೋತ್ಸವ ಅದ್ದೂರಿಯಾಗಿ ಅರ್ಥಪೂರ್ಣವಾಗಿ ವರ್ಷದ ಹಬ್ಬವಾಗಿ ಆಚರಿಸಲ್ಪಟ್ಟಿದೆ.ಹತ್ತು ಸಾಧಕರ ಸನ್ಮಾನದ ಜೊತೆಯಲ್ಲಿ 10 ಛಾಯಮಿತ್ರರು ನೇತ್ರದಾನದ ಸಂಕಲ್ಪದ ಘೋಷಣೆ ಮುಂತಾದ ಜನಸ್ನೇಹಿ ಕಾರ್ಯಗಳ ಮೂಲಕ ದಶಮಾನೋತ್ಸವ ಸಂಪನ್ನಗೊಂಡಿದೆ. ಈ ವರ್ಷ 16 ನೇ ವರ್ಷದ ಸಂದರ್ಭ ಜಿಲ್ಲಾ ಸಂಘಟನೆ ಬೆಳ್ಳಿಹಬ್ಬದ ರಜತ ಕಾರ್ಯಕ್ರಮಕ್ಕೆ ಸುಮಾರು 7 ಲಕ್ಷ ರೂಪೈಗಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
      ಪ್ರತೀ ವರ್ಷ ಜಿಲ್ಲಾ ಸಂಘ ನೀಡುವ ಉತ್ತಮ ವಲಯ ಪ್ರಶಸ್ತಿಯನ್ನು ಒಟ್ಟು ನಾಲ್ಕು ಬಾರಿ ಬಂಟ್ವಾಳ ವಲಯವು ಪಡೆದ ಸಾಧನೆಯನ್ನು ಮಾಡಿದೆ.
      ನಮ್ಮ ಬಂಟ್ವಾಳದ ಎಲ್ಲಾ ಜನತೆಯ ಸಹಕಾರ, ಅಧಿಕಾರಿಗಳ ಪ್ರೋತ್ಸಾಹ, ಇಲಾಖೆಗಳ ಬೆಂಬಲ.. ಎಲ್ಲಾ ಸಮಾಜ ಸ್ನೇಹಿ ಸಂಘಟನೆಗಳ ಸಂಪರ್ಕದಿಂದ ಎಸ್.ಕೆ.ಪಿ.ಎ ಬಂಟ್ವಾಳ ವಲಯ ಮುನ್ನಡೆಯುತ್ತಿದೆ. ಸದಸ್ಯರ ಪದಾಧಿಕಾರಿಗಳ ಸ್ನೇಹಹಸ್ತ ಈ ಸಂಘದ ಯಶಸ್ಸಿಗೆ ಮೂಲ ಕಾರಣ.
      ತಿಂಗಳ ಮಂಗಳವಾರ ಸರ್ವಸದಸ್ಯರ ಸಭೆ ಅಗತ್ಯವಿದ್ದಲ್ಲಿ, ಪದಾಧಿಕಾರಿಗಳ ತುರ್ತು ಸಭೆ ವರ್ಷದಲ್ಲಿ ವಾರ್ಷಿಕೋತ್ಸವ, ಪದಗ್ರಹಣ ಸಮಾರಂಭ, ನೂತನ ಸದಸ್ಯರ ಸೇರ್ಪಡೆ, ನೂತನ ದಂಪತಿಗಳ ಗುರುತಿಸುವಿಕೆ, ಸಮಾಜದಲ್ಲಿ ಸ್ಥಾನಮಾನ ಪಡೆದ ಸದಸ್ಯರಿಗೆ ಸನ್ಮಾನ ಮುಂತಾದ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿರುವ ಎಸ್,ಕೆ,ಪಿ,ಎ. ಬಂಟ್ವಾಳ ವಲಯ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸುತ್ತಿದೆ.

Show more (+)

ಬಂಟ್ವಾಳ ವಲಯವನ್ನು ಮುನ್ನಡೆಸಿದ ಸಾರಥಿಗಳು

flag

 ಶ್ರೀ.ಟಿ. ಹರೀಶ್ ರಾವ್
    2000-2004

flag

 ಶ್ರೀ. ಸತೀಶ್ ಕುಮಾರ್
    2009-2011

flag

 ಶ್ರೀ. ದಯಾನಂದ ಬಿ.
    2011-2013

flag

 ಶ್ರೀ . ಆನಂದ್ ಎನ್.
    2013-2015

ಚಿತ್ರಸಂಪುಟ